ವೆಂಕಟರಾವ್, ಆಲೆಮನೆ
	1889-1935. ಕನ್ನಡಕ್ಕಾಗಿ ಕೆಲಸ ಮಾಡಿದ ಮಹನೀಯರು. ಇವರ ತಂದೆ ಆಲೆಮನೆ ರಾಮರಾಯರು ಆಂಧ್ರದ ಕರ್ನೂಲು, ಅನಂತಪುರ ಪ್ರಾಂತ್ಯಗಳಿಂದ ಬಂದು ಮಂಗಳೂರು ಜಿಲ್ಲೆಯಲ್ಲಿ ರೆವಿನ್ಯೂ ಅಧಿಕಾರಿಗಳಾಗಿದ್ದರು. ವೆಂಕಟರಾವ್ ಅವರು ಪ್ರಾರಂಭದಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ಮದರಾಸು ವೈದ್ಯಕೀಯ ಕಾಲೇಜು ಸೇರಿ, ಎರಡು ವರ್ಷಗಳ ಕಾಲ ವ್ಯಾಸಂಗಮಾಡಿ ಅದರಲ್ಲಿ ಒಲವಿಲ್ಲದೆ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜನ್ನು ಸೇರಿ ಬಿ.ಎ. ಪದವಿ ಗಳಿಸಿದರು. ಅನಂತರ ಎಲ್.ಟಿ. ಪದವಿಯನ್ನು ಪಡೆದು ಸ್ವಲ್ಪ ಕಾಲ ಬಳ್ಳಾರಿ ಜಿಲ್ಲೆಯಲ್ಲಿ ಶಾಲಾ ಇನ್ಸ್‍ಪೆಕ್ಟರಾಗಿಯೂ ಕೆಲವು ಕಾಲ ಕೇರಳದ ಮಲಬಾರಿನ ಬಡಗರ ಮಿಷನ್ ಶಾಲೆಯಲ್ಲಿ ಗಣಿತದ ಅಧ್ಯಾಪಕರಾಗಿಯೂ ಕೆಲಸ ಮಾಡಿದರು. ಅನಂತರ ತಾವು ಓದಿದ ಮಂಗಳೂರು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮದರಾಸು ವಿಶ್ವವಿದ್ಯಾಲಯ ಕನ್ನಡ ವಿಭಾಗವನ್ನು ಆರಂಭಿಸಿದಾಗ (1927) ಇವರು ಆ ವಿಭಾಗದ ಮೊದಲ ಪ್ರಾಧ್ಯಾಪಕರಾಗಿ ನೇಮಕಗೊಂಡು ಆ ಇಲಾಖೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಇವರ ನೇತೃತ್ವದಲ್ಲಿ ಕೆಲವು ಅಮೂಲ್ಯ ಕನ್ನಡ ಕಾವ್ಯಗಳು ಮದರಾಸು ವಿಶ್ವವಿದ್ಯಾಲಯದ ಮೂಲಕ ಬೆಳಕು ಕಂಡವು. ನೃಪತುಂಗನ ಕವಿರಾಜಮಾರ್ಗ, ಗುಣವರ್ಮನ ಪುಷ್ಪದಂತ ಪುರಾಣ, ಕೇಶಿರಾಜನ ಶಬ್ದಮಣಿದರ್ಪಣ (ಲಿಂಗಣಾರಾಧ್ಯನ ಟೀಕೆ ಸಹಿತ), ಪೊನ್ನನ ಶಾಂತಿಪುರಾಣ-ಇವು ಮುಖ್ಯವಾದುವು. ಇವುಗಳ ಸಂಪಾದನೆಯಲ್ಲಿ ಇವರ ಪಾತ್ರ ಹಿರಿದಾಗಿತ್ತು.

	ಇವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಉತ್ತಮ ಪಾಂಡಿತ್ಯ ಗಳಿಸಿದ್ದರು. 1917ರಲ್ಲಿ ಇವರು ಚಂದ್ರಗುಪ್ತ ಚಕ್ರವರ್ತಿ ಎಂಬ ತೆಲುಗು ಕಾದಂಬರಿಯನ್ನು ಸರಳವಾದ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭದ ದಿನಗಳಲ್ಲಿ ಇವರು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮದರಾಸು ಪ್ರಾಂತವನ್ನು ಪ್ರತಿನಿಧಿಸಿದ್ದರು. ಕನ್ನಡದ ಕೆಲಸಕಾರ್ಯಗಳನ್ನು ಹುರುಪಿನಿಂದ ಮಾಡು ತ್ತಿದ್ದಾಗಲೆ 1935ರಲ್ಲಿ ನಿಧನರಾದರು.			
	(ಪಿ.ಎಸ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ